ಖಾಸಗಿ ಜಮೀನಿನ ಮಾಲೀಕರು / ಅಭಿವೃದ್ಧಿದಾರರ ವಿನ್ಯಾಸದ ಉಪ-ವಿಭಜನೆ ಯೋಜನೆಗೆ (ಲೇಔಟ್) ಅನುಮೋದನೆಯ ವಿಧಾನ
ಕೃಷಿ ಉದ್ದೇಶದಿಂದ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿರುವ ಜಮೀನಿನ ಮಾಲೀಕರು ಸೂಕ್ತ ದಾಖಲೆಗಳೊಂದಿಗೆ, ವಿನ್ಯಾಸ ಅನುಮೋದನೆಗಾಗಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.
ಸಲ್ಲಿಸಲಾದ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಹೆಚ್ಚುವರಿ ದಾಖಲಾತಿಗಳು / ಸ್ಪಷ್ಟೀಕರಣಗಳ ಅಗತ್ಯವಿದ್ದರೆ, ಅರ್ಜಿದಾರರು ಸದರಿ ಅಗತ್ಯ ಮಾಹಿತಿ ಅಥವಾ ದಾಖಲೆಯನ್ನು ಒದಗಿಸಬೇಕಾಗಿರುತ್ತದೆ.
ಪ್ರಸ್ತಾಪಿತ ವಿನ್ಯಾಸ ನಕ್ಷೆ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ವಿನ್ಯಾಸ ಅನುಮೋದನೆಯ ಪ್ರಸ್ತಾವನೆಯನ್ನು ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ, ಸಭೆಯ ಅನುಮೋದನೆ ಪಡೆಯಲಾಗುತ್ತದೆ.
ವಿನ್ಯಾಸ ಅನುಮೋದನೆಗೆ ಸಕಾ೯ರದಿಂದ ನಿಗಧಿಪಡಿಸಲಾಗಿರುವ ಅಗತ್ಯ ಶುಲ್ಕವನ್ನು ಅಜಿ೯ದಾರರು ಪಾವತಿಸಿದ ನಂತರ, ಕೆಲವು ನಿರ್ದಿಷ್ಟ ಸಾಮಾನ್ಯ ಷರತ್ತುಗಳಿಗೆ ಒಳಪಟ್ಟು ವಿನ್ಯಾಸ ನಕ್ಷೆಗೆ ಅನುಮೋದನೆಯನ್ನು ನೀಡಲಾಗುತ್ತದೆ. ತದನಂತರ, ಸರ್ಕಾರದ ಅಧಿಸೂಚನೆ ಸಂಖ್ಯೆ: DPAL 26 ಶಾಸನ 2021, ಬೆಂಗಳೂರು ದಿನಾಂಕ 05.07.2021 ರನ್ವಯ ಕೆಲವು ಷರತ್ತುಗಳಿಗೊಳಪಟ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು.
ವಿನ್ಯಾಸದ ಉಪ-ವಿಭಜನೆಯ ಪ್ರಸ್ತಾವನೆಗಳಿಗೆ ಮಾರ್ಪಾಡುಗಳು ಅಥವಾ ಪರಿಷ್ಕರಣೆ ಅಗತ್ಯವಿದ್ದರೆ, ಅರ್ಜಿದಾರರು ಅಂತಹ ಅಗತ್ಯ ಮಾರ್ಪಾಡುಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದ ನಂತರ ಪರಿಶೀಲಿಸಿ, ಮಾಪ೯ಡಿತ / ಪರಿಷ್ಕೃತ ವಿನ್ಯಾಸ ನಕ್ಷೆಗಳಿಗೆ ಅನುಮೋದನೆ ನೀಡಲಾಗುವುದು.
ವಿನ್ಯಾಸ ಅನುಮೋದನೆಯ ಪ್ರಸ್ತಾವನೆಗಳಿಗೆ ಜಮೀನಿನ ಮಾಲೀಕರು / ಅಭಿವೃದ್ಧಿದಾರರು ಸಹಿ ಮಾಡಿದ ಅಜಿ೯ಯೊಂದಿಗೆ ಸಲ್ಲಿಸಬೇಕಾದ ಕನಿಷ್ಟ ಅಗತ್ಯ ದಾಖಲಾತಿಗಳು:-
1) ಕ್ರಯ ಪತ್ರದ ಪ್ರತಿ:- ಪ್ರಸ್ತಾಪಿತ ಜಮೀನುಗಳ ದೃಢೀಕೃತ ಕ್ರಯ ಪತ್ರ / ವಿಭಾಗ ಪತ್ರ/ ದಾನ ಪತ್ರ / ಜಿಪಿಎ ಪತ್ರದ ಪ್ರತಿಗಳು.
2) ಭೂ ಪರಿವರ್ತನಾ ಆದೇಶದ ಪ್ರತಿ: ಪ್ರಸ್ತಾಪಿತ ಜಮೀನುಗಳ ಭೂ ಪರಿವರ್ತನೆಯ ಮೂಲ / ದೃಢೀಕೃತ ಆದೇಶದ ಪ್ರತಿಗಳು.
3) ಆರ್.ಟಿ.ಸಿ. ಪ್ರತಿಗಳು: ಪ್ರಸ್ತಾಪಿತ ಜಮೀನುಗಳ ಮೂಲ ಆರ್.ಟಿ.ಸಿ. ಪ್ರತಿಗಳು.
4) ಋಣಭಾರರಾಹಿತ್ಯ ಪ್ರಮಾಣ ಪತ್ರ:- ಪ್ರಸ್ತಾಪಿತ ಜಮೀನುಗಳನ್ನು ಮೂಲ ಮಾಲೀಕರು ಖರೀದಿಸಿದ ದಿನದಿಂದ ಅರ್ಜಿ ಸಲ್ಲಿಸಲಾದ ದಿನಾಂಕದವರೆಗಿನ ಋಣಭಾರರಾಹಿತ್ಯ ಪ್ರಮಾಣ ಪತ್ರ ಪತ್ರದ ಮೂಲ ಪ್ರತಿಗಳು (ಇ.ಸಿ. ಫಾರಂ-15).
5) ಮ್ಯುಟೇಷನ್:- ಪ್ರಸ್ತಾಪಿತ ಜಮೀನುಗಳ ಮ್ಯುಟೇಷನ್ ನ ದೃಢೀಕೃತ / ಮೂಲ ಪ್ರತಿಗಳು.
6) ಸರ್ವೆ ನಕ್ಷೆ:- ಭೂದಾಖಲೆಗಳ ಸಹಾಯಕ ನಿರ್ದೇಶಕರಿಂದ ದೃಢೀಕರಿಸಿದ ಸರ್ವೆ ನಕ್ಷೆಯ ಮೂಲ ಪ್ರತಿ (ಭೂ ಪರಿವರ್ತನಾ ಆದೇಶ ಸಂಖ್ಯೆ ಮತ್ತು ದಿನಾಂಕ, ಸದರಿ ಜಮೀನಿಗೆ ಲಗತ್ತಾಗಿರುವ ಸಾರ್ವಜನಿಕ ರಸ್ತೆ, ಜಮೀನಿನ ಸುತ್ತಳತೆ, ಅಧಿಕ ವಿದ್ಯುತ್ ವಾಹಕ ತಂತಿ, ಖರಾಬಿನ ಮಾಹಿತಿ ಹಾಗೂ ಅಕ್ಕಪಕ್ಕದ ಜಮೀನುಗಳ ಚೆಕ್ಕುಬಂದಿ ಗಳನ್ನೊಳಗೊಂಡ ಪೂರ್ಣ ಮಾಹಿತಿ).
7) ಗ್ರಾಮ ನಕ್ಷೆ:- ಭೂದಾಖಲೆಗಳ ಸಹಾಯಕ ನಿರ್ದೇಶಕರಿಂದ ಸದರಿ ಜಮೀನನ್ನು ಗುರುತಿಸಿ ದೃಢೀಕರಿಸಲ್ಪಟ್ಟ ಗ್ರಾಮ ನಕ್ಷೆಯ ಮೂಲ ಪ್ರತಿ.
8) ಟೋಟಲ್ ಸ್ಟೇಷನ್ ಸರ್ವೆ ನಕ್ಷೆ:- ಪ್ರಸ್ತಾಪಿತ ಜಮೀನಿನ ಟೋಟಲ್ ಸ್ಟೇಷನ್ ಸರ್ವೆ ಮಾಡಿಸಿ ಕಂದಾಯ ಇಲಾಖೆಯ ಸರ್ವೆ ಸ್ಕೆಚ್ ಅನ್ನು ಅದರ ಮೇಲೆ ಸೂಪರ್ ಇಂಪೋಸ್ ಮಾಡಿಸಿದ ನಕ್ಷೆಯ ಪ್ರತಿ.
9) ಕರಡು ವಿನ್ಯಾಸ ನಕ್ಷೆ:- ಮೂಲ ಸರ್ವೆ ನಕ್ಷೆಗೆ ಅನುಗುಣವಾಗಿ ಹಾಗೂ ಅನುಮೋದಿತ ಮಹಾ ಯೋಜನೆಯ ವಲಯ ನಿಯಮಾವಳಿಗೆ ಅನುಗುಣವಾಗಿ ತಯಾರಿಸಲಾದ ಕರಡು ವಿನ್ಯಾಸ ನಕ್ಷೆಯ ಪ್ರತಿ.
10) ನಿರಾಕ್ಷೇಪಣಾ ಪತ್ರ: ಪ್ರಸ್ತಾಪಿತ ವಿನ್ಯಾಸಕ್ಕೆ ನೀರನ್ನು ಒದಗಿಸುವ ಸಂಬಂಧ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯಿಂದ ಪಡೆದ ನಿರಾಕ್ಷೇಪಣಾ ಪತ್ರ.
11) ನಿರಾಕ್ಷೇಪಣಾ ಪತ್ರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯವರಿಂದ ಪಡೆದ ನಿರಾಕ್ಷೇಪಣಾ ಪತ್ರ (ಜಮೀನಿನ ವಿಸ್ತೀರ್ಣವು 10 ಅಥವಾ 10 ಎಕರೆಗಿಂತ ಹೆಚ್ಚಾಗಿದ್ದಲ್ಲಿ ಮಾತ್ರ)
ಮೂಲ:ಹೊಸಕೋಟೆ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.