ಪ್ರಸ್ತಾವನೆ:

     ಹೊಸಕೋಟೆ ಯೋಜನಾ ಪ್ರಾಧಿಕಾರವು ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಟ್ಟು ಕಾರ್ಯ ನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಪ್ರಾಧಿಕಾರದ ಸ್ವಂತ ಕಛೇರಿಯು ಮಿಷನ್ ಹಾಸ್ಪಿಟಲ್ ರಸ್ತೆ, 1ನೇ ಅಡ್ಡ ರಸ್ತೆ, ಶ್ರೀ ವೆಂಕಟಾದ್ರಿ ಬಡಾವಣೆ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ -562114 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. 

      ಸರ್ಕಾರದಿಂದ ನೇಮಕಗೊಂಡ ಸ್ಥಳೀಯ ಪ್ರತಿನಿಧಿಗಳೊಬ್ಬರು ಪ್ರಾಧಿಕಾರದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಾರೆ.  ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು ನಿಯೋಜನೆಯ ಮೇಲೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳ ಸಂಬಂಧ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

ಹೊಸಕೋಟೆ ಯೋಜನಾ ಪ್ರಾಧಿಕಾರದ ಕಾರ್ಯಾರಂಭದ ಬಗ್ಗೆ:-

ಹೊಸಕೋಟೆ ಯೋಜನಾ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶವು ಈ ಮೊದಲು ಸರ್ಕಾರವು ಅನುಮೋದಿಸಿದ ರಚನಾ ನಕ್ಷೆ-2021 ರಂತೆ APZ 4 ಮತ್ತು 5, 6 ರಲ್ಲಿ ಬರುತ್ತಿದ್ದು, ಸದರಿ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ನೇರವಾಗಿ ಬಿ.ಎಂ.ಆರ್.ಡಿ.ಎ. ಕಾಯ್ದೆಯಡಿಯಲ್ಲಿ ನಿಯಂತ್ರಿಸಲಾಗುತ್ತಿತ್ತು. 

 ನಂತರದಲ್ಲಿ ಸರ್ಕಾರದಿಂದ ಅನುಮೋದಿತ ರಚನಾ ನಕ್ಷೆಯಂತೆ ಸದರಿ ಪ್ರದೇಶವನ್ನು ಹೊಸಕೋಟೆ ಸ್ಥಳೀಯ ಯೋಜನಾ ಪ್ರದೇಶವಾಗಿ ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಕಲಂ 4 (ಎ) ರನ್ವಯ ಸರ್ಕಾರದ ಆದೇಶ ಸಂ. ನಅಇ 118 ಬೆಂರೂಪ್ರಾ 2003, ದಿನಾಂಕ: 03.03.2006 ರಲ್ಲಿ ಹೊಸಕೋಟೆ ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸಲಾಗಿದೆ.  ಸರ್ಕಾರದ ಆದೇಶ ಸಂಖ್ಯೆ: ನಅಇ 31 ಬೆಂರೂಪ್ರಾ 2006 ದಿನಾಂಕ: 19.07.2006 ರಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಕಲಂ 4 (ಸಿ) ರನ್ವಯ ಹೊಸಕೋಟೆ ಯೋಜನಾ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ.  

     ಅದರಂತೆ, ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರ, ಬೆಂಗಳೂರು, ಇವರನ್ನು ಅಧ್ಯಕ್ಷರನ್ನಾಗಿ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರ ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.   ತದನಂತರ, ಸರ್ಕಾರದ ಆದೇಶ ಸಂ: ನಅಇ 83 ನಯೋಸೇ 2009, ಬೆಂಗಳೂರು, ದಿನಾಂಕ: 25.06.2009 ರಲ್ಲಿ ಪ್ರಾಧಿಕಾರದ ಸದಸ್ಯ-ಕಾರ್ಯದರ್ಶಿ ಹುದ್ದೆಯನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರ ಹುದ್ದೆಗೆ ಉನ್ನತೀಕರಿಸಿ ಆದೇಶಿಸಿ ನೇಮಿಸಲಾಗಿದೆ.  

      ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 125 ಬಿಎಂಆರ್ 2018 ದಿನಾಂಕ: 06.08.2018 ರ ಅಧಿಸೂಚನೆಯಲ್ಲಿ ಹೊಸಕೋಟೆ ಯೋಜನಾ ಪ್ರಾಧಿಕಾರಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4-ಸಿ(3) ರಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ರವರನ್ನು ಅಧ್ಯಕ್ಷರನ್ನಾಗಿ, ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ, ಉಪವಿಭಾಗಾಧಿಕಾರಿಗಳು, ದೊಡ್ಡಬಳ್ಳಾಪುರ ಉಪವಿಭಾಗ, ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಉಪವಿಭಾಗ, ಬೆಂಗಳೂರು ಹಾಗೂ ಪೌರಾಯುಕ್ತರು, ಹೊಸಕೋಟೆ ನಗರಸಭೆ, ಹೊಸಕೋಟೆ ರವರುಗಳನ್ನು ಸದಸ್ಯರನ್ನಾಗಿ ಪುನರ್ ರಚಿಸಿ ಆದೇಶಿಸಿದೆ.  

ಹೊಸಕೋಟೆ ಯೋಜನಾ ಪ್ರಾಧಿಕಾರದ ವ್ಯಾಪ್ತಿ:

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭೆ ಒಳಗೊಂಡಂತೆ ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿ, ಸೂಲಿಬೆಲೆ ಹೋಬಳಿ, ಅನುಗೊಂಡನಹಳ್ಳಿ ಹೋಬಳಿ, ನಂದಗುಡಿ ಹೋಬಳಿ ಮತ್ತು ಜಡಿಗೇನಹಳ್ಳಿ ಹೋಬಳಿಗಳಲ್ಲಿ (05 ಹೋಬಳಿಗಳ) ಬರುವಂತಹ ಸಂಪೂರ್ಣ ಗ್ರಾಮಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ 16 ಗ್ರಾಮಗಳನ್ನು ಒಳಗೊಂಡಂತಹ (ಒಟ್ಟು 316 ಗ್ರಾಮಗಳು) ಪ್ರದೇಶದ ವ್ಯಾಪ್ತಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ನಗರ ಮತ್ತು  ಗ್ರಾಮಾಂತರ  ಯೋಜನಾ  ಕಾಯ್ದೆ,  1961 ರನ್ವಯ  ಹೊಸಕೋಟೆ  ಸ್ಥಳೀಯ  ಯೋಜನಾ ಪ್ರದೇಶವನ್ನು ಘೋಷಿಸಿದ್ದು, ಸದರಿ ಸ್ಥಳೀಯ ಯೋಜನಾ ಪ್ರದೇಶದ ವಿಸ್ತೀರ್ಣವು 591.72 ಚ.ಕಿ.ಮೀ. ಇರುತ್ತದೆ.  ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿನ 11 ಯೋಜನಾ ಪ್ರಾಧಿಕಾರಗಳಲ್ಲಿ ಹೊಸಕೋಟೆ ಸ್ಥಳೀಯ ಯೋಜನಾ ಪ್ರದೇಶವು ಬೆಂಗಳೂರು ನಗರ ಜಿಲ್ಲೆಯ ಪೂರ್ವ ಭಾಗದಲ್ಲಿರುತ್ತದೆ ಹಾಗೂ ಕರ್ನಾಟಕ ರಾಜ್ಯದ ಆಗ್ನೇಯ ಭಾಗದಲ್ಲಿರುತ್ತದೆ.  ಸದರಿ ಯೋಜನಾ ಪ್ರದೇಶದ ಉತ್ತರಕ್ಕೆ ಶಿಡ್ಲಘಟ್ಟ ತಾಲ್ಲೂಕು ಮತ್ತು ದೇವನಹಳ್ಳಿ ತಾಲ್ಲೂಕು, ಪೂರ್ವಕ್ಕೆ ಕೋಲಾರ ಮತ್ತು ಮಾಲೂರು ತಾಲ್ಲೂಕು, ದಕ್ಷಿಣಕ್ಕೆ ತಮಿಳುನಾಡು ರಾಜ್ಯದ ಎಲ್ಲೆಯವರೆಗೆ ವಿಸ್ತರಿಸಿರುತ್ತದೆ.   ಹಾಗೂ ಪಶ್ಚಿಮಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ವ್ಯಾಪ್ತಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಇರುತ್ತದೆ.  ಹೊಸಕೋಟೆ ಪಟ್ಟಣವು ಬೆಂಗಳೂರಿನಿಂದ 27 ಕಿ.ಮೀ. ದೂರದಲ್ಲಿದ್ದು, ಹೊಸಕೋಟೆ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ NH-04 ಮತ್ತು  NH-207 ಹಾಗೂ ರಾಜ್ಯ ಹೆದ್ದಾರಿಗಳಾದ SH-35, SH-82, SH-95 ಮತ್ತು SH-96 ರಸ್ತೆಗಳು ಹಾದು ಹೋಗುತ್ತವೆ.  ಸದರಿ ಸ್ಥಳೀಯ ಯೋಜನಾ ಪ್ರದೇಶವು ಉತ್ತಮ ಪ್ರಾದೇಶಿಕ ರಸ್ತೆ ಸಂಪರ್ಕಜಾಲವನ್ನು ಹಾಗೂ ರೈಲು ಮಾರ್ಗಗಳನ್ನು ಹೊಂದಿರುತ್ತದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 36 ಬಿ.ಎಂ.ಆರ್ 2016, ಬೆಂಗಳೂರು, ದಿನಾಂಕ: 24.06.2016 ರಲ್ಲಿ “ಉಪನಗರ ವರ್ತುಲ ರಸ್ತೆ ಸ್ಥಳೀಯ ಯೋಜನಾ ಪ್ರದೇಶ” ವನ್ನು ಘೋಷಿಸಲಾಗಿರುತ್ತದೆ.   ಹೊಸಕೋಟೆ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಹಾಲಿ 316 ಗ್ರಾಮ ಮತ್ತು ಹೊಸಕೋಟೆ ನಗರಸಭೆ ಪ್ರದೇಶವನ್ನೂ ಒಳಗೊಂಡಂತೆ ಒಟ್ಟು 59172 ಹೆಕ್ಟೇರ್ ಅಥವಾ 591.72 ಚ.ಕಿ.ಮೀ. ಪ್ರದೇಶವಿದ್ದು, ಅದರಲ್ಲಿ Sಖಿಖಖ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುವ 51 ಗ್ರಾಮಗಳ ಒಟ್ಟು 11624 ಹೆಕ್ಟೇರ್ ಅಥವಾ 116.24 ಚ.ಕಿ.ಮೀ. ವಿಸ್ತೀರ್ಣವನ್ನು ಹಿಂತೆಗೆದುಕೊಳ್ಳಲಾಗಿರುತ್ತದೆ. 
   ಈ ಮೊದಲಿದ್ದ ಹೊಸಕೋಟೆ ಸ್ಥಳೀಯ ಯೋಜನಾ ಪ್ರದೇಶದ ವಿಸ್ತೀರ್ಣ 591.72 ಚ.ಕಿ.ಮೀ. ನಲ್ಲಿ ಉಪನಗರ ವರ್ತುಲ ರಸ್ತೆ ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಹಿಂತೆಗೆದುಕೊಳ್ಳಲಾದ 51 ಗ್ರಾಮಗಳ 116.24 ಚ.ಕಿ.ಮೀ. ವಿಸ್ತೀರ್ಣವನ್ನು ಹೊರತುಪಡಿಸಿ ಉಳಿದ 475.48 ಚ.ಕಿ.ಮೀ. ವಿಸ್ತೀರ್ಣವು (ಹೊಸಕೋಟೆ ನಗರಸಭೆ ಹಾಗೂ ತಾಲ್ಲೂಕಿನ 249 ಗ್ರಾಮಗಳು ಮತ್ತು ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ 16 ಗ್ರಾಮಗಳು ಸೇರಿದಂತೆ ಒಟ್ಟಾರೆ 265 ಗ್ರಾಮಗಳು) ಹಾಲಿ ಹೊಸಕೋಟೆ ಸ್ಥಳೀಯ ಯೋಜನಾ ಪ್ರದೇಶದ ವಿಸ್ತೀರ್ಣವಾಗಿರುತ್ತದೆ.

ಮೂಲ: ಹೊಸಕೋಟೆ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.